1879-1949. ಇಂಗ್ಲಿಷ್ ಪ್ರಬಂಧಕಾರ. ಐರ್ಲೆಂಡಿನ ಬೆಲ್‍ಷಾಸ್ಯನಲ್ಲಿ 1879ರಲ್ಲಿ ಜನಿಸಿದ. ಈತ 1901ರಲ್ಲಿ ಇಂಗ್ಲೆಂಡಿಗೆ ಹೋಗಿ ನೆಲೆಸಿ ಪತ್ರಕರ್ತನಾದ. ‘ನ್ಯೂಸ್ ಕ್ರಾನಿಕಲ್’ ಪತ್ರಿಕೆಯ ಸಾಹಿತ್ಯ ವಿಭಾಗದ ಸಂಪಾದಕನಾಗಿದ್ದ. ಸು. 40 ವರ್ಷಗಳ ಕಾಲ ವೃತ್ತಪತ್ರಿಕೆಯಲ್ಲಿ ಸತತವಾಗಿ ಸಾಪ್ತಾಹಿಕ ಅಂಕಣವನ್ನು ಬರೆದು ಲಿಯೊನಾರ್ಡ್ ವುಲ್ಫ್‍ರಂಥ ಚಿಂತಕರ ಮೆಚ್ಚುಗೆಗೆ ಪಾತ್ರನಾದ. ಆ ಪುಟ್ಟ ಪ್ರಬಂಧಗಳಿಗಾಗಿ ಇವನು ಆರಿಸಿಕೊಳ್ಳದ ವಿಷಯವೇ ಇರಲಿಲ್ಲ. ಚಾಲ್ರ್ಸ್ ಲ್ಯಾಂಬ್‍ನಂತೆ, ಆತ್ಮೀಯ ರೀತಿಯಲ್ಲಿ ಹಲವು ವಿಷಯಗಳನ್ನು ಕುರಿತು ಲಲಿತ ಪ್ರಬಂಧಗಳನ್ನು ಈತ ಬರೆದಿದ್ದಾನೆ. ಯಾವ ಕೃತಕತೆಯಿ ಲ್ಲದ ಹಾಸ್ಯಮಿಂಚುವ ವ್ಯಕ್ತಿತ್ವ ಈ ಪ್ರಬಂಧಗಳಿಗೆ ಜೀವಕಳೆ ನೀಡಿದೆ. ದಿ ಆರ್ಟ್ ಆಫ್ ಲೆಟರ್ಸ್ (1920), ದಿ ಪ್ಲೆಷರ್ಸ್ ಆಫ್ ಇಗ್ನೊರೆನ್ಸ್ (1921), ಬುಕ್ಸ್ ಅಂಡ್ ಆಥರ್ಸ್ (1922), ದಿ ಬ್ಲೂ ಲೈಅನ್ (1923), ಇನ್ ಡಿಫೆನ್ಸ್ ಆಫ್ ಪಿಂಕ್ (1937)-ಇವು ಇವನ ಕೆಲವು ಪ್ರಬಂಧ ಸಂಗ್ರಹಗಳು. ಈತ ಐರ್ಲೆಂಡನ್ನು ಕುರಿತು ಐರಿಷ್ ಅಂಡ್ ಇಂಗ್ಲಿಷ್ (1908), ಐರ್ಲೆಂಡ್, ಎ ನೇಷನ್ (1919), ದಿ ಗ್ರೀನ್ ಮ್ಯಾನ್ (1928) ಮೊದಲಾದ ಕೃತಿಗಳನ್ನು ರಚಿಸಿದ್ದಾನೆ. ಈತ 1949ರಲ್ಲಿ ನಿಧನನಾದ. 
			
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ